ವಿಜಯಪುರ- ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ನಿಗಮ ಸ್ಥಾಪನೆಗಳಿಗೆ ಮಾಜಿ ಸಚಿವ ಎಂ ಬಿ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ನಿಗಮ ಸ್ಥಾಪನೆಯಿಂದ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಆಯಾ ಸಮಾಜಗಳು ಮುಂದೆ ಬರುತ್ತವೆ ಎಂದು ಸಲಹೆ ನೀಡಿದ್ದಾರೆ. ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಸ್ಥಾಪನೆಯಿಂದ ಸಹಾಯ ವಾಗಬಹುದು, ಆದ್ರೆ ದೊಡ್ಡ ಸಮುದಾಯಗಳಿಗೆ ನಿಗಮದಿಂದ ಯಾವುದೇ ಲಾಭವಿಲ್ಲ ಎಂದಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಲಿಂಗಾಯತ ಸಮುದಾಯ 1.8 ಕೋಟಿ ಜನಸಂಖ್ಯೆ ಇದೆ, ಒಟ್ಟು ರಾಜ್ಯದ ಜನ ಸಂಖ್ಯೆಯಲ್ಲಿ, ಶೇಕಡಾ 16 ರಿಂದ 18 ರಷ್ಟು ಜನ ಲಿಂಗಾಯತರಿದ್ದಾರೆ , ಈ ನಿಗಮಕ್ಕೆ 100 ಅಥವಾ 200 ಕೋಟಿ ರೂಪಾಯಿ ಅನುದಾನ ನೀಡಿದರೆ ಯಾವುದೇ ಉಪಯೋಗವಿಲ್ಲ, ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದರೂ ಸಾಲದು ಎಂದು ತಿಳಿಸಿದ್ದಾರೆ. 1000 ಕೋಟಿ ಅನುದಾನ ನೀಡಿದರೂ ಸಮಾಜದ 25% ದಷ್ಟು ಜನರಿಗೆ ಮಾತ್ರ ಅನುಕೂಲವಾಗಲಿದೆ, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಯತ್ನಿಸಿದ್ದರು ಒಂದು ವೇಳೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದ್ದರೆ 1000, ಮೆಡಿಕಲ್ ಸೀಟುಗಳು 5000 ಇಂಜಿನಿಯರಿಂಗ್ ಸೀಟುಗಳು ಸಮಾಜದ ವಿದ್ಯಾರ್ಥಿಗಳಿಗೆ ಸಿಗುತ್ತಿತ್ತು.
ಆನೆ ಕೊಟ್ಟಾಗ ಬಿಟ್ಟು ಇಲಿ ಹಿಡಿಯೋಕೆ ಹೊರಟಂತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವೀರಶೈವ ಲಿಂಗಾಯತ ನಿಗಮಕ್ಕೆ ಕೊಡುವುದಾದರೆ 5000 ಕೋಟಿ ರೂಪಾಯಿ ಕೊಡಿ, ನಾನು ನಿಗಮಕ್ಕೆ ವಿರೋಧ ಮಾಡಿದರೆ ಎಂಬಿ ಪಾಟೀಲ್ ನಿಗಮ ವಿರೋಧಿಯೆಂದು ಪಟ್ಟ ಕಟ್ಟುತ್ತಾರೆ. ಈ ಹಿಂದೆ ನನಗೆ ಧರ್ಮ ಒಡೆದವರು ಎಂದು ಪಟ್ಟ ಕಟ್ಟಿದರು ಧರ್ಮ ಒಡೆದವರು ಇವರು, ಜನರನ್ನು ಹಾಳು ಮಾಡಿದವರಿವರು ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದ್ರು. ಲಿಂಗಾಯತ ಸಮಾಜದ ಮಕ್ಕಳ ಭವಿಷ್ಯ ಹಾಳು ಮಾಡಿದವರು ಇವರು, ಯಾರು ಧರ್ಮ ಒಡೆದರು ಎಂಬುದಕ್ಕೆ ಉತ್ತರ ಕೊಡುವೆ ಎಂದು ಹೇಳಿದ ಎಂ ಬಿ ಪಾಟೀಲ ಮುಂದಿನ ದಿನಗಳಲ್ಲಿ ಎಲ್ಲವನ್ನು ದೀರ್ಘವಾಗಿ ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಜನರು ಇನ್ನಾದರೂ ಇದರ ಬಗ್ಗೆ ತಿಳಿದುಕೊಳ್ಳಲಿ ಎಂದು ಹೇಳಿದರು.