Chariot Festival News: ರಾಯಚೂರು: “ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನ ಸಪ್ತರಥೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಇದಕ್ಕೆ ಸಕಲ ರೀತಿಯಾಗಿ ಶ್ರೀಮಠದಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ” ಎಂದು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
“2025 ಆ. 8 ರಿಂದ 14ನೇ ತಾರಿಕಿನವರೆಗೆ ರಾಯರ ಆರಾಧನಾ ಮಹೋತ್ಸವ ಜರುಗಲಿದೆ. ಆ.8ರಂದು ಸಂಜೆ ಶ್ರೀಮಠದ ಮುಂಭಾಗದಲ್ಲಿ ಧ್ವಜಾರೋಹಣ ನೇರವೇರಿಸುವ ಮೂಲಕ ಚಾಲನೆ ನೀಡಲಾಗುವುದು. ಬಳಿಕ ಪ್ರಾರ್ಥನೋತ್ಸವ, ಪ್ರಭ ಉತ್ಸವ, ಧನ್ಯತೋತ್ಸವ ನಡೆಯಲಿದೆ. ಆ.9ರಂದು ತಿರುಮಲ ತಿರುಪತಿಯಿಂದ ಶ್ರೀನಿವಾಸ ದೇವರ ಶೇಷ ವಸ್ತ್ರ ಆಗಮಿಸಲಿದ್ದು, ಅದನ್ನು ಮಠದ ಸಂಪ್ರಾಯದಂತೆ ಸ್ವೀಕರಿಸಿ ರಾಯರಿಗೆ ಸಮರ್ಪಣೆ ಮಾಡಲಾಗುವುದು” ಎಂದರು. .
“ಪ್ರತಿನಿತ್ಯ ರಾಯರ ಮೂಲ ಬೃಂದಾವನದಲ್ಲಿ ನಿರ್ಮಲ್ಯ ವಿಸರ್ಜನೆ, ಶ್ರೀಉತ್ಸವ, ಪಾದಪೂಜೆ ಮತ್ತ ಪಂಚಾಮೃತ, ಹಸ್ತದೋಂಕ ಸೇರಿದಂತೆ ನಾನ ಪೂಜೆ ನಡೆಯಲಿವೆ. ಆ.10 ರಂದು ರಾಯರ ಪೂರ್ವರಾಧನೆ ಜರುಗಲಿದೆ.
ಆ.11ರಂದು ಮಧ್ಯಾರಾಧನೆ, ಆ.12ರಂದು ರಾಯರ ಉತ್ತರಾಧನೆ ನಡೆಯಲಿದೆ. ಮಧ್ಯಾರಾಧನೆಯೆಂದು ರಾಯರ ಮೂಲಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಜರುಗಲಿದೆ. ಸುವರ್ಣ ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಲಿವೆ”.
“ಆ. 12ರಂದು ಮಧ್ಯಾರಾಧನಾ ನಡೆಯಲಿದೆ. ರಾಯರ ಪರಮ ಭಕ್ತರು ಮೂಲಬೃಂದಾವನಕ್ಕೆ ನವರತ್ನ ಖಚಿತವಾದ ಆಭರಣ ನೀಡಿದ್ದು, ಅಂದು ರಾಯರಿಗೆ ಸಮರ್ಪಿಸುವ ಮೂಲಕ ವಿಶೇಷವಾಗಿ ಅಲಂಕಾರಿಸಿದ ಮೇಲೆ ಮಹಾರಥೋತ್ಸವ ಜರುಗಲಿದೆ. ಈ ವೇಳೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿಯನ್ನು ನೆರವೇರಿಸಲಾಗುವುದು” ಎಂದು ತಿಳಿಸಿದರು.
“ಶ್ರೀಮಠದ ಸಂಪ್ರದಾಯದಂತೆ ವಿವಿಧ ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ವಿಶೇಷ ಪೂಜಾರಾಧಾನೆಗಳು, ಪ್ರಾಕಾರದಲ್ಲಿ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ದಾಸವಾಣಿ, ಸಂಗೀತ, ನೃತ್ಯ, ವಾದ್ಯ ಸಂಗೀತ ಮುಂತಾದ ಕಾರ್ಯಕ್ರಮಗಳು ಜರುಗಲಿವೆ.
ಪ್ರಾಕಾರದ ವೇದಿಕೆಯಲ್ಲಿ ವಿದ್ವಾಂಸರಿಂದ ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆ, ಅವರ ಗ್ರಂಥಗಳ ವೈಶಿಷ್ಟ್ಯ ಮುಂತಾದ ವಿಷಯಗಳ ಕುರಿತು ಪ್ರವಚನ, ಸಮಗ್ರ ಗ್ರಂಥಗಳ ಪಾರಾಯಣ, ವಿದ್ವಾಂಸರ ಪ್ರವಚನ, ಸಾಮೂಹಿಕ ಭಜನೆ, ಗ್ರಂಥಗಳ ಪ್ರಕಾಶನ ಸಹ ಆಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಅಲ್ಲದೆ, “ಪೂರ್ವಾರಾಧನೆ ದಿನದಂದು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀಮಠದ ಪ್ರತಿಷ್ಠಿತ ಪ್ರಶಸ್ತಿ ‘ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ’ “ಗುರು ಅನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ರಾಯರ ದರ್ಶನಕ್ಕಾಗಿ ಶ್ರೀಕ್ಷೇತ್ರಕ್ಕೆ ಬರುವ ಭಕ್ತರಸಂಖ್ಯೆ ಅನೂಹ್ಯವಾಗಿ ಹೆಚ್ಚುತ್ತಿದ್ದು ಬರುವ ಭಕ್ತರಿಗೆ ಯಾವುದೇ ತೊಂದರೆಯಿಲ್ಲದಂತೆ ದರ್ಶನವನ್ನು ಕಲ್ಪಿಸಲು ಉತ್ತಮವಾದ ಸರದಿಸಾಲಿನ ವ್ಯವಸ್ಥೆ, ಕಂಪಾರ್ಟ್ಮೆಂಟ್ ಇತ್ಯಾದಿಗಳನ್ನು ವ್ಯವಸ್ಥೆ ಮಾಡಲಾಗಿದೆ”.
“ಸಾಮಾನ್ಯ ಭಕ್ತರಿಗೆ ಅನುಕೂಲಕರವಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆರಾಧನ ಸಪ್ತರಾತ್ರೋತ್ಸವದ ಸಂದರ್ಭದಲ್ಲಿ, ನೂತನವಾಗಿ ನಿರ್ಮಿಸಿರುವ ಡಾರ್ಮಿಟರಿ ಹಾಲ್, ಲಾಕರ್ ಸದುಪಾಯಗಳನ್ನು ಉದ್ಘಾಟಿಸಲಾಗುವುದು.
ಶ್ರೀಮಠದ ಸಮೀಪದಲ್ಲೇ ನಿರ್ಮಿಸಿರುವ ಪುಷ್ಕರಿಣಿ, ಶ್ರೀರಾಯರ ಮೂಲಬೃಂದಾವನದ ಮುಂದಿನ ಶಿಲಾಸ್ತಂಭಗಳಿಗೆ ಸುವರ್ಣಲೇಪಿತ ಕವಚಗಳನ್ನು ತೊಡಿಸುವಿಕೆ, ಶಿಲಾಮಂಟಪದ ದಕ್ಷಿಣಭಾಗಕ್ಕೆ ಸುವರ್ಣಕವಚ ಅಳವಡಿಸುವಿಕೆ ಮುಂತಾದವುಗಳನ್ನು ಲೋಕಾರ್ಪಣೆ ಮಾಡಲಾಗುವುದು”.
“ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರಿಗಾಗಿ ಯೋಗ್ಯವಾದ ವಸತಿಗೃಹಗಳನ್ನು, ಕ್ಲಾಕ್ ರೂಂಗಳನ್ನು, ನದಿ ತೀರದಲ್ಲಿ ಸ್ನಾನ ಘಟ್ಟಗಳನ್ನು ಸಾಮೂಹಿಕ ಶೌಚಾಲಯಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ನದಿಯಲ್ಲಿನ ಪ್ರವಾಹವನ್ನು ದೃಷ್ಟಿಯಲ್ಲಿರಿಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಅಂಧ್ರ ಪ್ರದೇಶ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ”.
“ಬರುವ ಪ್ರತಿಯೊಬ್ಬ ಭಕ್ತರಿಗೆ ತೀರ್ಥಪ್ರಸಾದ ಜೊತೆಗೆ ಹೆಚ್ಚಿನ ಸಂಖ್ಯೆಯ ಪರಿಮಳಪ್ರಸಾದ ವಿತರಣಾ ಕೌಂಟರ್ಗಳನ್ನು ತೆರೆಯಲಾಗುವುದು. ಭಕ್ತರ ಆರೋಗ್ಯದ ಮುನ್ನೆಚ್ಚರಿಕೆ ದೃಷ್ಟಿಯಿಂದ ಆರೋಗ್ಯ ಶಾಲೆಯ ಜೊತೆಗೆ ಮಠದ ಮುಂಭಾಗದಲ್ಲಿ ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುವುದು”.
“ರಾಜ್ಯ ಪೋಲೀಸ್ ಇಲಾಖೆಯವರ ಸಹಯೋಗದೊಂದಿಗೆ ಅಗತ್ಯ ಭದ್ರತಾ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ, ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರ ಸಹಾಯದಿಂದ, ಸ್ವಚ್ಛತೆ, ನೈರ್ಮಲ್ಯಗಳನ್ನು ಕಾಪಾಡಿ, ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ, ಆರಾಧನಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಕಲ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ” ಎಂದು ಶ್ರೀಗಳು ವಿವರಿಸಿದರು.