ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಬಂಜಾರಾ ಸಮುದಾಯದ ಆಕ್ರೋಶ ಮುಗಿಲು‌ ಮುಟ್ಟಿದೆ‌. ಒಳ‌ಮೀಸಲಾತಿಯ ವರ್ಗೀಕರಣದ ವಿರುದ್ಧ ಸಿಡಿದೆದ್ದಿರುವ ಬಂಜಾರಾ ಸಮುದಾಯ ಶಿಗ್ಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕೂಡಲೇ ಮೀಸಲಾತಿ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ರು.

ಶಿಗ್ಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಾಗಿ ಬಂದು ಹೊಸ ಬಸ್ ನಿಲ್ದಾಣದವರೆಗೂ ಸಾಗಿತ್ತು.

ಆತ್ಮಹತ್ಯೆಗೆ ಯತ್ನಿಸಿದ್ರಾ ಶ್ರೀಗಳು..?
ಇನ್ನು, ಬಂಜಾರಾ ಸಮುದಾಯದ ಪ್ರತಿಭಟನೆ ವೇಳೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಹುಬ್ಬಳ್ಳಿಯ ಬಂಜಾರಾ ಪೀಠದ ಶ್ರೀಗಳಾದ ಶ್ರೀ ತಿಪ್ಪೇಶ್ವರ ಸ್ವಾಮೀಜಿಯವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದಲೇ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ರು. ಹೀಗಾಗಿ ಇದೇ ವೇಳೆ ಅಲ್ಲಿ ನೆರೆದಿದ್ದ ಸಮುದಾಯದ ಜನ ಶ್ರೀಗಳನ್ನು ತಕ್ಷಣವೇ ಕೆಳಗಿಳಿಸಲು ಪ್ರಯತ್ನಿಸಿದ್ರು. ಹೀಗಾಗಿ, ಈ ಘಟನೆ ಬಂಜಾರಾ ಸಮುದಾಯದವರಲ್ಲಿ ಸಾಕಷ್ಟು ಕಿಚ್ಚು ಹೊತ್ತಿಸಿದೆ.

ಒಟ್ನಲ್ಲಿ, ಒಳ‌ಮೀಸಲಾತಿ ಬೇಗುದಿಯಲ್ಲಿ ಬೆಂದಿರುವ ಬಂಜಾರಾ ಸಮುದಾಯದವರು ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಸಿಡಿದೆದ್ದಿದ್ದು, ಸಿಎಂ ತವರು ಕ್ಷೇತ್ರದಲ್ಲಿ ಕಿಡಿ ಹೊತ್ತಿಸಿದ್ದಾರೆ. ಪ್ರತಿಭಟನೆಯ ಸ್ವರೂಪ ಮತ್ತಷ್ಟು ಗಟ್ಟಿಗೊಳ್ಳುವ ಹಂತದಲ್ಲಿದ್ದು ಬರುವ ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ಕೊಡಬಹುದಾದ ಎಲ್ಲಾ ಸಾಧ್ಯತೆಯಿದೆ.

ವರದಿ: ಮಂಜುನಾಥ ಪಾಟೀಲ್