ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್

ಕಾರವಾರ: ಮಾದಕ ವಸ್ತುಗಳ ಬಳಕೆಯಿಂದ ಅದನ್ನು ಸೇವನೆ ಮಾಡುವ ವ್ಯಕ್ತಿಯ ಕುಟುಂಬದ ಮೇಲೆ ಮಾತ್ರವಲ್ಲದೇ ಇಡೀ ಸಮಾಜದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಡಿ.ಎಸ್.ವಿಜಯ ಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದರು.

ಅವರು ಭಾನುವಾರ ಕ್ರಿಮ್ಸ್ ನ ಕುವೆಂಪು ಕಲಾಭವನದಲ್ಲಿ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಉತ್ತರ ಕನ್ನಡ ಜಿಲ್ಲೆ ಅವರ ವತಿಯಿಂದ, ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳಿಗೆ, ಸರ್ಕಾರಿ ಅಭಿಯೋಜಕರುಗಳಿಗೆ, ಪೊಲೀಸ್ ಅಧಿಕಾರಿಗಳಿಗೆ, ತನಿಖಾ ಸಹಾಯಕರುಗಳಿಗೆ ಮತ್ತು ವಿವಿಧ ಇಲಾಖಾ ಅಧಿಕಾರಿಗಳಿಗೆ ಆಯೋಜಿಸಿದ್ದ “ಮಾದಕ ದ್ರವ್ಯಗಳ ಮತ್ತು ಮನೋವಿಕೃತ ವಸ್ತುಗಳ ಅಧಿನಿಯಮ-1985 “ರ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ಮನೆಯಲ್ಲಿ ಕಳ್ಳತನ, ಕುಟುಂಬದಲ್ಲಿ ಕೊಲೆಗಳು, ಅಪಘಾತ ಪ್ರಕರಣಗಳು , ಹಿಂಸಾತ್ಮಕ ಕೃತ್ಯಗಳು ಹೆಚ್ಚಾಗುತ್ತಿದ್ದು, ಇದು ಇಡೀ ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಮಾದಕ ವಸ್ತುಗಳ ಮಾರಾಟದಿಂದ ದೊರೆಯುವ ಹಣವೂ ಕೂಡಾ ದುಷ್ಕೃತ್ಯಗಳಿಗೆ ಪ್ರೇರಣೆ ನೀಡಲಿದೆ. ಇಂತಹ ಪ್ರಕರಣಗಳಲ್ಲಿ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿನ ಮಾದಕ ದ್ರವ್ಯಗಳ ಮತ್ತು ಮನೋವಿಕೃತ ವಸ್ತುಗಳ ಗಂಭೀರ ಪ್ರಕರಣಗಳ ಕುರಿತಂತೆ ಜಿಲ್ಲಾ ನ್ಯಾಯಾಲಯದಲ್ಲಿ ಜನವರಿ 2022 ರಿಂದ ಮಾರ್ಚ್ 2025 ರ ವರೆಗೆ ಇದುವರೆಗೆ 21 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 5 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗಿದ್ದು, 36 ಪ್ರಕರಣಗಳು ಬಾಕಿ ಇವೆ ಎಂದ ಜಿಲ್ಲಾ ನ್ಯಾಯಾಧೀಶರು ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ ಎಂದರು.

ಪ್ರಕರಣಗಳಲ್ಲಿ ಪೊಲೀಸರು ಪ್ರಾಪರ್ಟಿ ರಿಜಿಸ್ಟರ್ ನ್ನು ಸೂಕ್ತ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು, ಎಫ್.ಎಸ್.ಎಲ್ ವರದಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು, ಮಾದಕ ವಸ್ತಗಳು ಮಾದರಿಗಳ ಸಂಗ್ರಹಣೆ ಮತ್ತು ಕಾಯಿದೆಯಲ್ಲಿ ತಿಳಿಸಿರುವ ಕಡ್ಡಾಯ ತನಿಖೆಗಳನ್ನು ಮಾಡಬೇಕು, ತನಿಖಾ ವಿಧಾನಗಳಲ್ಲಿ ಸುಧಾರಿತ ಕ್ರಮಗಳನ್ನು ಅನುಸರಿಸಬೇಕು, ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಗುಣಮಟ್ಟದ ತನಿಖೆಯನ್ನು ಕೈಗೊಳ್ಳುವ ಮೂಲಕ ಆರೋಪಿತರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು, ಮಾದಕ ವಸ್ತುಗಳ ಬಳಕೆದಾರರು ಮತ್ತು ಸಾಗಾಣಿಕೆ ಮಾಡುವವರಿಗೆ ಎಚ್ಚರಿಕೆ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಜಿಲ್ಲಾ ಮಟ್ಟದ ಎನ್‌ಕೋರ್ಡ್ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ನಿರಂತರವಾಗಿ ಸಭೆಗಳನ್ನು ನಡೆಸಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕುರಿತಂತೆ ಮಾಹಿತಿಗಳ ಸಂಗ್ರಹಣೆ ಮತ್ತು ಸಮನ್ವಯದ ಮೂಲಕ ಜಾಗೃತಿ ಮೂಡಿಸುತ್ತಿದೆ, ಜಿಲ್ಲೆಯು 5 ಜಿಲ್ಲೆಗಳೊಂದಿಗೆ ಮತ್ತು ಗೋವಾ ರಾಜ್ಯದೊಂದಿಗೆ ಗಡಿ ಹೊಂದಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯ ಹೋಂ ಸ್ಟೇ ಗಳಿದ್ದು ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುತ್ತಿದ್ದು , ಮಾದಕ ವಸ್ತುಗಳ ಸರಬರಾಜು ಮತ್ತು ಬಳಕೆ ನಡೆಯದಂತೆ ಸದಾ ಜಾಗೃತರಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕುರಿತಂತೆ, 345 ಪ್ರಕರಣಗಳನ್ನು ದಾಖಲಿಸಿ, 571 ಮಂದಿಯನ್ನು ಬಂಧಿಸಿ, ರೂ.62.36 ಲಕ್ಷ ಮೊತ್ತದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 149 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಮಾದಕ ವಸ್ತುಗಳ ನಿರ್ಮೂಲನೆಯ ವಿರುದ್ದ ಪೊಲೀಸ್ ಇಲಾಖೆ ಸಮರ ಸಾರಿದೆ ಎಂದರು.

ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಉಪ ವಿಭಾಗಾಧಿಕಾರಿ ಕನಿಷ್ಕ, ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮಾ, ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್, ಸಂಪನ್ಮೂಲ ವ್ಯಕ್ತಿಯಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮಾ ಜೆ ರೋಡಿಗ್ರಸ್, ಪ್ರಧಾನ ಸರ್ಕಾರಿ ಅಭಿಯೋಜತಿ ತಜುಜಾ ಬಿ ಹೊಸಪಟ್ಟಣ, ಬೆಂಗಳೂರು ನಗರದ ಅಬಕಾರಿ ಉಪ ಅಧೀಕ್ಷಕ ಸೈಯದ್ ತಫ್‌ಜಿಲ್ ಉಲ್ಲಾ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬೆಂಗಳೂರಿನ ನಿರೀಕ್ಷಕ ಷಣ್ಮುಗಂ ಉಪಸ್ಥಿತರಿದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಸ್ವಾಗತಿಸಿದರು, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ ಪಡಿಯಾರ ವಂದಿಸಿದರು.