ಬೆಳಿಗ್ಗೆ ಬಿಜೆಪಿಯಲ್ಲಿ ಚಹಾ ಕುಡಿದು, ರಾತ್ರಿಯಾದಂತೆ ಕಾಂಗ್ರೆಸ್ ಜೊತೆ ಚೀಯರ್ಸ್ ಹೇಳೊ, ಬೆನ್ನಿಗೆ ಚೂರಿ ಹಾಕೊ ಕಾರ್ಯಕರ್ತರು, ಮುಖಂಡರು ನಮಗೆ ಬೇಕಾಗಿಲ್ಲ. ಅಂತಹ ಮನಸ್ಥಿತಿಯವರು ಇದ್ರೆ ಈಗಲೇ ಈ ಸಭೆಯಿಂದಲೇ ಎದ್ದು ಹೋಗಿ ಅಂತಾ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲ್ ಖಡಕ್ಕಾಗೇ ಎಚ್ಚರಿಸಿದ್ರು.

ಅವ್ರು, ಮುಂಡಗೋಡ ತಾಲೂಕಿನ ಇಂದೂರಿನ ಕಲ್ಮೇಶ್ವರ ದೇವಸ್ಥಾನದಲ್ಲಿ ನಡೆದ ಇ‌ಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ರು. ಕೊಪ್ಪರಿಗೆ ಹಾಲಿನಲ್ಲಿ ಒಂದು ಸಣ್ಣ ಉಪ್ಪಿನ ಚೂರು ಹಾಕಿದ್ರೂ ಇಡೀ ಕೊಪ್ಪರಿಗೆ ಹಾಲೇ ಕೆಟ್ಟು ಹೋಗತ್ತೆ ಹೀಗಾಗಿ, ನಮ್ಮ ಪಕ್ಷದ ಹಾಲಿಗೆ ಉಪ್ಪು ಬೆರೆಸೋರು ನಮಗೆ ಬೇಕಾಗಿಲ್ಲ, ಪಕ್ಷದ ಸಂಘಟನೆ ದೃಷ್ಟಿಯಿಂದ ನಮಗೆ ಅಂತಹ ಕಾರ್ಯಕರ್ತರು, ಮುಖಂಡರು ಬೇಡವೇ ಬೇಡ. ನಾವೇಲ್ಲರೂ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತೇವೆ ಅಂತಾ ರವಿಗೌಡ ಪಾಟೀಲ್ ಖಡಕ್ಕಾಗಿ ನುಡಿದ್ರು.

 

ಇದಕ್ಕೂ ಮುನ್ನ ಮಾತನಾಡಿದ, ಸಿದ್ದಪ್ಪ ಹಡಪದ, ಪಕ್ಷಕ್ಕಾಗಿ ದುಡಿದವರ ಬಗ್ಗೆ ಹಿರಿಯರು ಯೋಚಿಸಬೇಕಿದೆ. ಕಿವಿ ಕಚ್ಚುವವರನ್ನು ದೂರವಿಡಬೇಕಿದೆ ಅಂದ್ರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ವಿರುದ್ಧವಾಗಿ ನಮ್ಮವರೇ ಪ್ರಚಾರ ಮಾಡಿದ್ರು. ಹೀಗಾಗಿ, ನಮ್ಮ ಪಕ್ಷದ ಕೆಲವು ಅಭ್ಯರ್ಥಿಗಳು ಸೋಲಬೇಕಾಯ್ತು. ಬಿಜೆಪಿಯೊಂದಿಗೆ ಇದ್ದು ಕಾಂಗ್ರೆಸ್ ಜೊತೆ ಕೈ ಮಿಲಾಯಿಸೋ ಕೆಲವರ ಬಗ್ಗೆ ಎಚ್ಚರವಹಿಸಬೇಕು, ಇದೇಲ್ಲವನ್ನೂ ಹಿರಿಯರು ಗಮನಿಸಬೇಕಿದೆ ಅಂತಾ ತಿಳಿಸಿದ್ರು.

ಸಭೆಯಲ್ಲಿ ತಾಲೂಕಾ ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ್ ಹಾವಣಗಿ, ಜಗದೀಶ್ ಕುರುಬರ್, ಸಿದ್ದಪ್ಪ ಹಡಪದ್, ವಿವೇಕ್ ಹೆಬ್ಬಾರ್, ಕಸಾಪ ತಾಲೂಕಾಧ್ಯಕ್ಷ ಸಹದೇವಪ್ಪ ನಡಿಗೇರಿ, ಇಂದೂರು ಮಾಜಿ ಗ್ರಾಪಂ ಅಧ್ಯಕ್ಷ ಮಹ್ಮದ್ ರಫೀಕ್ ದೇಸಳ್ಳಿ ಸೇರಿದಂತೆ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.