ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟ..? ರೈತನಿಗೆ ತೀವ್ರ ಗಾಯ, ಕೈ ಬೆರಳುಗಳೇ ಕಟ್..! ಅಲ್ರಿ ಅಧಿಕಾರಿಗಳೇ ಇದೇಲ್ಲ ನಿಮ್ಮ ಗಮನಕ್ಕೇ ಇಲ್ವಾ..?

ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ನಡೆಯಬಾರದ ಭಯಾನಕ ಘಟನೆಯೊಂದು ನಡೆದಿದೆ. ಕುರಿ ಕಾಯುತ್ತಿದ್ದ ವ್ಯಕ್ತಿಯೋರ್ವ ನಾಡಬಾಂಬ್? ಸ್ಪೋಟಗೊಂಡು ಗಾಯಗೊಂಡಿದ್ದಾನೆ‌. ಘಟನೆ ನಡೆದು ಹತ್ತಾರು ಗಂಟೆಗಳೇ ಕಳೆದ್ರೂ ಮುಂಡಗೋಡಿನ ಯಾವೊಬ್ಬ ಅಧಿಕಾರಿಯೂ ಹೇಗಿದ್ದಿಯಪ್ಪಾ ಯಜಮಾನಾ ಅಂತಾ ಬಂದು ಮಾತಾಡಿಸಿಲ್ಲ.

ಅದು ಭಯಾನಕ..!
ಅಂದಹಾಗೆ, ಬಾಚಣಕಿಯ ಬರಮಪ್ಪ ವಡ್ಡರ್ ಎಂಬುವ ರೈತನೇ ಸದ್ಯ ನಾಡಬಾಂಬ್? ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದಾನೆ. ಈತ ತನ್ನ ಕುರಿಗಳನ್ನು ಮೇಯಿಸಲು ಊರ ಪಕ್ಕದಲ್ಲೇ ಇರೋ ಕೆರೆಯ ಹತ್ತಿರ ಹೋಗಿದ್ದ. ಈ ವೇಳೆ ಬಹಿರ್ದೆಸೆಗೆ ಅಂತಾ ಹೋಗಿದ್ದಾಗ ಹೊಳಪಿರೋ ಒಂದು ವಸ್ತು ಕಂಡಿದೆ. ಅದು ಏನಿರಬಹುದು ಅಂತಾ ಕೈಯಿಂದ ಅದನ್ನ ಹಿಡಿದು ಹಿಚುಕಿದ್ದಾನೆ ಅಷ್ಟೆ. ತಕ್ಷಣವೇ ಅದು ಭಯಾನಕವಾಗಿ ಸ್ಪೋಟಗೊಂಡಿದೆ. ಪರಿಣಾಮ ರೈತನ ಎಡಗೈನ ಎರಡು ಬೆರಳುಗಳೇ ಕಟ್ ಆಗಿವೆ. ಹೀಗಾಗಿ, ಮುಂಡಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ರೈತ ಚಿಕಿತ್ಸೆ ಪಡೆದು ಸದ್ಯ ಮನೆಗೆ ಬಂದಿದ್ದಾನೆ‌. ಆದ್ರೆ, ಇಷ್ಟೇಲ್ಲ ದುರಂತ ಆದ್ರೂ ಈ ಕ್ಷಣದವರೆಗೂ ಸಂಬಂಧಪಟ್ಟ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ.

ಅದು ನಾಡಬಾಂಬ್..?
ಅಂದಹಾಗೆ, ಹಾಗೆ ಸ್ಪೋಟಗೊಂಡು ಇನ್ನೇನು ರೈತನ ಜೀವಕ್ಕೇ ಕುತ್ತು ತಂದಿದ್ದ ಆ ವಸ್ತು ನಾಡಬಾಂಬ್ ಇರಬಹುದು ಅಂತಾ ಅಂದಾಜಿಸಲಾಗಿದೆ. ಅಲ್ರಿ, ಊರ ಪಕ್ಕದಲ್ಲೇ ಅದೂ ಕೂಡ ಜನರು ಓಡಾಡುವ, ಸಾಕು ಪ್ರಾಣಿಗಳು ನೀರು ಕುಡಿಯಲು ಅವಲಂಬಿಸಿರೋ ಕೆರೆಯ ಪಕ್ಕದಲ್ಲೇ ಹೀಗೆ ನಾಡಬಾಂಬ್? ಇಟ್ಟಿದ್ದಾರೆ ಅಂದ್ರೆ ತಾಲೂಕಿನಲ್ಲಿ ವ್ಯವಸ್ಥೆ ಅದೇಷ್ಟರ ಮಟ್ಟಿಗೆ ಖರಾಬಾಗಿ ಹೋಗಿದೆ ನೀವೇ ಅರ್ಥೈಸಿಕೊಳ್ಳಿ. ಜನನೀಬೀಡ ಜಾಗದಲ್ಲಿ ಇಂತಹ ಸ್ಫೋಟಕ ವಸ್ತುಗಳನ್ನು ಇಡೋಕೆ ಅದೇಂತಹ ದೈರ್ಯ..?

ಪ್ರಾಣಿಗಳ ಬೇಟೆಗೆ ಬಾಂಬ್..?
ಅಸಲು, ಬಾಚಣಕಿ, ವಡಗಟ್ಟಾ ಭಾಗ ಸೇರಿದಂತೆ ತಾಲೂಕಿನ ಹಲವು ಕಡೆ ಕಾಡು ಪ್ರಾಣಿಗಳ ಬೇಟೆ ನಿರಂತರವಾಗಿದೆ ಅನ್ನೋ ಆರೋಪಗಳಿವೆ. ವಿಪರ್ಯಾಸ ಅಂದ್ರೆ ಕೆಲವು ಅಡ್ನಾಡಿ ಅರಣ್ಯ ಸಿಬ್ಬಂದಿಗಳೇ ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಸಾಥ್ ನೀಡ್ತಾರೆ ಅನ್ನೋ ಆರೋಪಗಳಿವೆ. ವಾಚಮನ್ ಅನ್ನೋ ಹೆಸರು ಹಾಕೊಂಡು ಸುತ್ತಾಡೋ ಸಿಬ್ಬಂದಿಗಳು ಕಂಡರೂ ಕಾಣದ ಹಾಗೆ ಇರ್ತಾರೆ ಅನ್ನೋ ಮಾತುಗಳಿವೆ. ಹೀಗಾಗಿ, ಇದೇಲ್ಲ ಇಲ್ಲಿನ ಅರಣ್ಯ ಅಧಿಕಾರಿಗಳು ಗಮನಿಸಬೇಕಿದೆ.