Ayushman Yojana:
70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರವು ಆಯುಷ್ಮಾನ್ ಆ್ಯಪ್ ಮೂಲಕ ಆಯುಷ್ಮಾನ್ ವಯೋ ವಂದನಾ ಕಾರ್ಡ್ ಅನ್ನು ನೀಡುತ್ತಿದೆ.
ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿ (PM-JAY), 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಭಾರತ ಸರ್ಕಾರವು ನೀಡುತ್ತಿದೆ.
ಈ ಯೋಜನೆಯ ಪ್ರಾರಂಭ ಮತ್ತು ಹಿನ್ನೆಲೆ ಏನು?
ಆಯುಷ್ಮಾನ್ ವಯೋ ವಂದನಾ ಯೋಜನೆಯು ಸೆಪ್ಟೆಂಬರ್ 23, 2018 ರಂದು ಪ್ರಾರಂಭವಾಯಿತು ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಿಂದ (NHA) ಅನುಷ್ಠಾನಗೊಳ್ಳುತ್ತಿದೆ. ಆಯುಷ್ಮಾನ್ ವಯೋ ವಂದನಾ ಕಾರ್ಡ್ ಪಡೆಯಲು ಆಯುಷ್ಮಾನ್ ಆ್ಯಪ್ನಲ್ಲಿ ನೋಂದಾಯಿಸಿಕೊಳ್ಳುವುದು ಹೇಗೆ ಮತ್ತು ಈ ಯೋಜನೆಯ ಅರ್ಹತೆಗಳೇನು ಎಂಬುದನ್ನು ಈ ಕೆಳಗೆ ತಿಳಿಯಿರಿ.
ಆಯುಷ್ಮಾನ್ ವಯೋ ವಂದನಾ ಕಾರ್ಡ್ನ ಪ್ರಮುಖ ಉಪಯೋಗವೇನು?
ಯಾವುದೇ ಆದಾಯದ ಮಿತಿಯಿಲ್ಲದೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಗಳನ್ನು ಪಡೆಯಲು ಈ ಕಾರ್ಡ್ ಸಹಾಯ ಮಾಡುತ್ತದೆ. ಆಯುಷ್ಮಾನ್ ವಯೋ ವಂದನಾ ಕಾರ್ಡ್ ಪಡೆಯುವ ವಿಧಾನವನ್ನು ಆರೋಗ್ಯ ಸಚಿವಾಲಯವು ವಿಡಿಯೋ ಮೂಲಕ ಈ ಕೆಳಗಿನಂತೆ ವಿವರಿಸಿದೆ.
ಆಯುಷ್ಮಾನ್ ವಯೋ ವಂದನಾ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಕೆಳಗಿನ ಹಂತಗಳನ್ನು ಅನುಸರಿಸಿ
ಹಂತ 1: ಪ್ಲೇ ಸ್ಟೋರ್ನಿಂದ ಆಯುಷ್ಮಾನ್ ಭಾರತ್ ಆ್ಯಪ್ ಡೌನ್ಲೋಡ್ ಮಾಡಿ.
ಹಂತ 2: ಫಲಾನುಭವಿ ಅಥವಾ ಆಪರೇಟರ್ ಆಗಿ ಲಾಗಿನ್ ಆಗಲು ಆಯ್ಕೆಮಾಡಿ.
ಹಂತ 3: ಕ್ಯಾಪ್ಚಾ, ಮೊಬೈಲ್ ಸಂಖ್ಯೆ ಮತ್ತು ದೃಢೀಕರಣದ ವಿಧಾನದಂತಹ ಅಗತ್ಯವಿರುವ ವಿವರಗಳನ್ನು ಎಂಟ್ರಿ ಮಾಡಿ ಮತ್ತು ಲಾಗಿನ್ ಆಯ್ಕೆಮಾಡಿ.
ಹಂತ 4: ರಾಜ್ಯ ಮತ್ತು ಆಧಾರ್ ಕಾರ್ಡ್ ವಿವರಗಳಂತಹ ಫಲಾನುಭವಿಯ ವಿವರಗಳನ್ನು ಭರ್ತಿ ಮಾಡಿ.
ಹಂತ 5: ಫಲಾನುಭವಿ ಸಿಗದಿದ್ದರೆ, ಇ-ಕೆವೈಸಿ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ ಮತ್ತು ಒಟಿಪಿಗಾಗಿ ಸಮ್ಮತಿ ನೀಡಿ.
ಹಂತ 6: ಅಗತ್ಯವಿರುವ ಕ್ಷೇತ್ರಗಳಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಘೋಷಣೆಯನ್ನು ಸಲ್ಲಿಸಿ.
ಹಂತ 7: ಫಲಾನುಭವಿಯ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಎಂಟ್ರಿ ಮಾಡಿ.
ಹಂತ 8: ವರ್ಗ ಮತ್ತು ಪಿನ್ ಕೋಡ್ ಸೇರಿದಂತೆ ವಿವರಗಳನ್ನು ಸಹ ಎಂಟ್ರಿ ಮಾಡಿ.
ಹಂತ 9: ಕುಟುಂಬ ಸದಸ್ಯರ ವಿವರಗಳನ್ನು ಎಂಟ್ರಿ ಮಾಡಿ ಮತ್ತು ಸಲ್ಲಿಸಿ.
ಹಂತ 10: ಇ-ಕೆವೈಸಿ ಪೂರ್ಣಗೊಂಡ ಬಳಿಕ ಮತ್ತು ಅನುಮೋದನೆಗೊಂಡ ನಂತರ, ಆಯುಷ್ಮಾನ್ ವಯೋ ವಂದನಾ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ 1800 11 0770 ಗೆ ಮಿಸ್ಡ್ ಕಾಲ್ ನೀಡಿ.
ಆಯುಷ್ಮಾನ್ ವಯೋ ವಂದನಾ ಕಾರ್ಡ್ ಕುರಿತು ಪ್ರಮುಖಾಂಶಗಳು.
- ವಯೋ ವಂದನಾ ಕಾರ್ಡ್ ಅನ್ನು ಅಕ್ಟೋಬರ್ 2024 ರಲ್ಲಿ AB PM-JAY ಅಡಿಯಲ್ಲಿ ಹಿರಿಯ ನಾಗರಿಕರಿಗೆ ಪರಿಚಯಿಸಲಾಯಿತು. ಈ ಕಾರ್ಡ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.
- ಕಾರ್ಡ್ ಹೊಂದಿರುವವರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು.
- ನವೆಂಬರ್ 18, 2025 ರಂದು ಸರ್ಕಾರ ನೀಡಿದ ಹೇಳಿಕೆಯ ಪ್ರಕಾರ, ಕಾರ್ಡ್ ಹಿರಿಯ ನಾಗರಿಕರ ಜೇಬಿನಿಂದ ಖರ್ಚಾಗುವ ಹಣವನ್ನು ಸಹ ಭರಿಸುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿ ಆಗಿರುವ ಆಸ್ಪತ್ರೆಗಳು ಎಷ್ಟು?
ಸರ್ಕಾರ ಸಂಸತ್ತಿಗೆ ನೀಡಿರುವ ಮಾಹಿತಿಯ ಪ್ರಕಾರ, ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ 13,866 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಸೇರಿದಂತೆ 30,957 ಎಂಪನೇಲ್ಡ್ ಆರೋಗ್ಯ ಪೂರೈಕೆದಾರರ ಜಾಲದ ಮೂಲಕ 8.9 ಕೋಟಿಗೂ ಹೆಚ್ಚು ಆಸ್ಪತ್ರೆ ದಾಖಲಾತಿಗಳನ್ನು ಅಧಿಕೃತಗೊಳಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ದೂರು ನೀಡಿ!
AB-PMJAY ಅಡಿಯಲ್ಲಿ, ನೋಂದಣಿ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಸಾರ್ವಜನಿಕ ಮತ್ತು ಖಾಸಗಿ ನೋಂದಾಯಿತ ಆಸ್ಪತ್ರೆಗಳು ಯೋಜನೆಯ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.ಈ ಯೋಜನೆಯಡಿ ನೋಂದಾಯಿತ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ನಿರಾಕರಿಸಿದ ಸಂದರ್ಭದಲ್ಲಿ, ಫಲಾನುಭವಿಗಳು ಕುಂದುಕೊರತೆ ದೂರು ಸಲ್ಲಿಸಬಹುದು.
AB-PMJAY ಅಡಿಯಲ್ಲಿ, ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳುವಲ್ಲಿ ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೂರು ಹಂತದ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ರಚಿಸಲಾಗಿದೆ. ಪ್ರತಿ ಹಂತದಲ್ಲಿ, ಕುಂದುಕೊರತೆಗಳನ್ನು ಪರಿಹರಿಸಲು ಮೀಸಲಾದ ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಪರಿಹಾರ ಸಮಿತಿಗಳಿವೆ.
ಫಲಾನುಭವಿಗಳು ವೆಬ್ ಆಧಾರಿತ ಪೋರ್ಟಲ್ ಕೇಂದ್ರೀಕೃತ ಕುಂದುಕೊರತೆ ಪರಿಹಾರ ನಿರ್ವಹಣಾ ವ್ಯವಸ್ಥೆ (CGRMS), ಕೇಂದ್ರ ಮತ್ತು ರಾಜ್ಯ ಕರೆ ಕೇಂದ್ರಗಳು (14555), ಇಮೇಲ್, ರಾಜ್ಯ ಆರೋಗ್ಯ ಸಂಸ್ಥೆಗಳಿಗೆ (SHAs) ಪತ್ರ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಕುಂದುಕೊರತೆಗಳನ್ನು ಸಲ್ಲಿಸಬಹುದು. ಕುಂದುಕೊರತೆಯ ಸ್ವರೂಪವನ್ನು ಆಧರಿಸಿ, ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯುವಲ್ಲಿ ಫಲಾನುಭವಿಗಳಿಗೆ ಬೆಂಬಲ ನೀಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.