ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಹಾಗೂ ಯಲ್ಲಾಪುರ ಸಂಪರ್ಕಿಸುವ ಸುಂಕಸಾಳ ಹೆದ್ದಾರಿಯಲ್ಲಿ ತುಂಬಿದ್ದ ನೆರೆ ನೀರಿನಲ್ಲಿ ಬೈಕ್ ಸವಾರ ಹಾಗೂ ಸಹ ಸವಾರನು ಕೊಚ್ಚಿಹೋಗಿದ್ದು ಕೊಚ್ಚಿಹೋದ ಸಹ ಸವಾರ ಕೇಶವ್ ನಾಯ್ಕ ಎಂಬುವವರನ್ನು ಅಂಕೋಲ ಪಿ.ಎಸ್.ಐ ಸಂಪತ್ ರವರು ರಕ್ಷಣೆಮಾಡಿ ಕರೆತಂದಿದ್ದಾರೆ.
ಇನ್ನು ಬೈಕ್ ಸವಾರ ಹೊನ್ನಾವರ ಮೂಲದ ಸಂತೋಷ್ ನಾಯ್ಕ್ (30) ನೀರಿನಲ್ಲಿ ಕೊಚ್ಚಿ ಹೋಗಿದ್ದು ಈತನಿಗಾಗಿ ಅರಣ್ಯದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ರಸ್ತೆಯನ್ನು ಬೈಕ್‌ನಲ್ಲಿ ದಾಟುವಾಗ ಆಯತಪ್ಪಿ ಬಿದ್ದು ಕೊಚ್ಚಿ ಹೋದ ಸಂತೋಷ್ ನಾಯ್ಕ್ ಕಳೆದ 6 ತಿಂಗಳಿಂದ ಹೆಗ್ಗಾರದ ಕೇಶವ ನಾಯ್ಕ್ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ತನ್ನ ಕುಟುಂಬದೊಂದಿಗೆ ವಾಸ್ತವ್ಯ ಮಾಡಿಕೊಂಡಿದ್ದ ಸಂತೋಷ್ ಇಂದು ತನ್ನ ಮಾವನ ಜತೆ ದಿನಸಿ ಪದಾರ್ಥ ತರಲು ಗುಳ್ಳಾಪುರಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ. ಇನ್ನು ನೀರಿನಲ್ಲಿ ಕೊಚ್ಚಿಹೋದ ಸಂತೋಷ್ ದಟ್ಟ ಅರಣ್ಯದಲ್ಲಿ ಸಿಲುಕಿರುವ ಸಾಧ್ಯತೆಗಳಿದ್ದು ಈತನಿಗಾಗಿ ಹುಡುಕಾಟ ನಡೆದಿದೆ.