ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿದ್ದಂತೆ ಮಂಗಳೂರಿನ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸಂಭ್ರಮದ ಕಳೆ ಎದ್ದಿದೆ. ಕಳೆದ ಅನೇಕ ವರ್ಷಗಳಿಂದ ಎದುರುನೋಡುತ್ತಿದ್ದ ಸಂಭ್ರಮದ ಕ್ಷಣ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. 1992ರ ಅಯೋಧ್ಯೆ ಕರಸೇವೆಯಲ್ಲಿ ಕರಾವಳಿಯ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಪೈಕಿ ಅನೇಕ ಮಂದಿ ಇಂದು ಸಂಭ್ರಮ ಪಟ್ಟಿದ್ದಾರೆ. ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ರಾಮಚಂದ್ರನಿಗೆ ಪೂಜೆ ಅರ್ಪಿಸಿ ನಮಿಸಿದ ಕಾರ್ಯಕರ್ತರು, ಅಯೋಧ್ಯೆಯಿಂದ ಶಿಲಾನ್ಯಾಸ ಕಾರ್ಯಕ್ರಮವನ್ನು ನೇರ ಪ್ರಸಾರ ವ್ಯವಸ್ಥೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು. ಬಳಿಕ ಹೊರಭಾಗದಲ್ಲಿ ಚೆಂಡೆ, ತಮಟೆ ಬಾರಿಸುವ ಮೂಲಕ ಕುಣಿದಾಡಿದರು. ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ ಸಂಭ್ರಮಾಚರಣೆಯನ್ನು ಕಚೇರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.