ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯಲ್ಲಿ ಇವತ್ತಿಗೂ ಪ್ರಾಮಾಣಿಕ, ಖಡಕ್ ಅಧಿಕಾರಿಗಳು ಫಿಲ್ಡಿನಲ್ಲಿ ಇದ್ದಾರೆ ಅನ್ನೋದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಪ್ರಭಾವಿಗಳ ದರ್ಪ ದೌಲತ್ತುಗಳ ನಡುವೆ ಅರಣ್ಯ ಇಲಾಖೆಯ ಅದೇಷ್ಟೋ ಸಂಪತ್ತು ಬರ್ಬಾದಾಗ್ತಿರೊ ಸಮಯದಲ್ಲಿ, ಅದೇಂತದ್ದೇ ಪ್ರಭಾವ ಇದ್ರೂ ತಮ್ಮ ನಿಯತ್ತಿನ ಕಾರ್ಯ ನಿರ್ವಹಿಸಿದ್ದಾರೆ ಇಲ್ಲಿನ ಅರಣ್ಯ ಅಧಿಕಾರಿಗಳು. ಅದಕ್ಕಾಗಿ ಅಂತವರಿಗೊಂದು ಹ್ಯಾಟ್ಸ್ ಅಪ್..!
ಅದು ಮೈನಳ್ಳಿ ಭಾಗ..!
ಅಂದಹಾಗೆ, ಮೈನಳ್ಳಿ ಭಾಗದ ಕಳಕಿಕಾರೆಯಲ್ಲಿ ಅರಣ್ಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅತಿಕ್ರಮಿತ ತೋಟದ ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬೆಲೆಬಾಳುವ ಸಾಗವಾನಿ ಮರದ ತುಂಡುಗಳನ್ನು ವಶಕ್ಕೆ ಪಡಿಸಿ ಕೊಂಡಿದ್ದಾರೆ. ಈ ಮೂಲಕ ಇಲ್ಲಿನ ಅರಣ್ಯ ಅಧಿಕಾರಿಗಳು ಕೆಚ್ಚೆದೆ ತೋರಿಸಿದ್ದಾರೆ.
ಜಪ್ಪಯ್ಯ ಅಂದ್ರೂ ಬಿಡಲಿಲ್ಲ..!
ಮೈನಳ್ಳಿ ಭಾಗದಲ್ಲಿ ಪ್ರಭಾವಿ ಮುಖಂಡರೆನಿಸಿಕೊಂಡಿರೋ, ಕಳಕೀಕಾರೆಯ ದೇವು ಜಾನು ಪಾಟೀಲ್ ಎಂಬುವವರಿಗೆ ಸೇರಿದೆ ಎನ್ನಲಾದ ಅತಿಕ್ರಮಿತ ತೋಟದ ಶೆಡ್ ನಲ್ಲಿ ಅಕ್ರಮವಾಗಿ ಸಾಗವಾನಿ ಮರದ ತುಂಡುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಖಡಕ್ ಅರಣ್ಯ ಅಧಿಕಾರಿಗಳಾದ ಸಂತೋಷ ಕುರುಬರ್, ಶ್ರೀಶೈಲ್ ಐನಾಪುರ ತಮ್ಮ ಬಲಿಷ್ಟ ಪಡೆಯೊಂದಿಗೆ ದಾಳಿ ನಡೆಸಿದ್ದಾರೆ. ತೋಟದಲ್ಲಿ ಸೇರಿದಂತೆ ತೋಟದ ಮದ್ಯೆ ಇರೋ ಶೆಡ್ ನಲ್ಲೂ ಬೆಲೆಬಾಳುವ ಅರಣ್ಯ ಸಂಪತ್ತು ಇರೋ ಬಗ್ಗೆ ಖಚಿತವಾದ ಬಳಿಕ ಶ್ರೀಮಾನ್ ದೇವು ಪಾಟೀಲರಿಗೆ ಅಧಿಕಾರಿಗಳು ಕರೆ ಮಾಡಿದ್ದಾರೆ. ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ಹೀಗಾಗಿ, ಕೆಲಹೊತ್ತಿನಲ್ಲೇ ಬಂದ ದೇವು ಪಾಟೀಲರು ಅಧಿಕಾರಿಗಳೊಂದಿಗೆ ಇನ್ನಿಲ್ಲದ ಕೋಪ ತಾಪ ತೋರಿಸಿಕೊಂಡಿದ್ದಾರೆ. ಅದೇನು ಮಹಾಪರಾಧವೇ ಅಲ್ಲ ಅಂತಾ ಅಲವತ್ತುಕೊಂಡಿದ್ದಾರೆ. ಆದ್ರೆ, ಅಲ್ಲಿದ್ದ ಖಡಕ್ ಅಧಿಕಾರಿಗಳು ಜಪ್ಪಯ್ಯ ಅಂದ್ರೂ ಕ್ಯಾರೇ ಮಾಡಿಲ್ಲ ತಮ್ಮ ಕರ್ತವ್ಯವನ್ನು ನಿಯಮಾನುಸಾರ ಮಾಡಿದ್ದಾರೆ. ಸರ್ಚ್ ವಾರೆಂಟ್ ನೀಡಿ ಶೆಡ್ಡಿನ ಬಾಗಿಲು ತೆರೆದಿದ್ದಾರೆ. ಆಗಲೇ ನೋಡಿ ಒಳಗಿರೋ ಅಸಲಿ ಸತ್ಯ ಹೊರಬಿದ್ದಿದೆ.
ಸಿಕ್ಕ “ಮಾಲು” ಎಷ್ಟು..?
ಅಷ್ಟಕ್ಕೂ, ಶೆಡ್ಡಿನ ಬಾಗಿಲು ತೆರೆದು ಒಳಹೊಕ್ಕ ಅರಣ್ಯ ಅಧಿಕಾರಿಗಳಿಗೆ ಒಳಗಡೆ ಕಾಲಿಡುತ್ತಿದ್ದಂತೆ, ಸಾಗವಾನಿ ಮರದ ತುಂಡುಗಳು ಸಿಕ್ಕಿವೆ, ಅಲ್ಲದೇ ಮರ ಕೊರೆಯಲು ಬಳಸುವ ಪರಿಕರಗಳೂ ಸಿಕ್ಕಿವೆ. ಹೀಗಾಗಿ, ಅಲ್ಲಿ ದೊರೆತ ಎಲ್ಲ ವಸ್ತುಗಳನ್ನೂ ಕಟ್ಟಿಗೆ ಸಮೇತ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಬರೋಬ್ಬರಿ ಕೇಸು ಜಡಿದಿದ್ದಾರೆ. ಅಲ್ಲದೇ, ಮುಂಡಗೋಡಿನ ಆರ್ ಎಫ್ ಓ ಸಾಹೇಬರ ತಾಬಾ ಒಪ್ಪಿಸಿದ್ದಾರೆ.
ಆದ್ರೆ..?
ವಿಪರ್ಯಾಸ ಅಂದ್ರೆ, ಈ ಕೇಸಿನಲ್ಲಿ ಮಾಲು ಸಿಕ್ಕರೂ ಇಲ್ಲಿನ ದಯಾಳು ಗುಣದ RFO ಸಾಹೇಬ್ರಿಗೆ ಇದು ದೊಡ್ಡ ಕೇಸು ಅಂತಾ ಅನಿಸಲಿಲ್ಲವೋ ಏನೋ..? ಅಷ್ಟಕ್ಕಷ್ಟೇ ಸರಿಮಾಡಿ ಕೈ ತೊಳೆದುಕೊಂಡಿದ್ದಾರೆ. ಸಹಜವಾಗಿ ಕೇಸು ದಾಖಲಿಸಿ ದಂಡ ಕಟ್ಟಿ ಸರಿಮಾಡಿಕೊಳ್ಳಿ ಸಾಹೇಬ್ರೇ ಅಂತಾ ಕೈ ಕುಲುಕಿ ಕಳಿಸಿದ್ದಾರೆ. ಹೀಗಾಗಿ, ಈ ಭಾಗದಲ್ಲಿ ಈ ಕೇಸಿನ ಬಗ್ಗೆ ಜನ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.
ಇದೊಂದೇ ಕೇಸಲ್ಲ..!
ಅಂದಹಾಗೆ, ಇಲ್ಲಿ ಎರಡುಮೂರು ತಿಂಗಳಲ್ಲಿ ಇದೇ ಭಾಗದಲ್ಲಿ, ಇದೇ ವ್ಯಕ್ತಿಯ ಮೇಲೆ ಎರಡುಮೂರು ಕೇಸು ದಾಖಲಾಗಿದೆ ಅನ್ನೋ ಮಾಹಿತಿ ಇದೆ. ಇವ್ರ ಅತಿಕ್ರಮಣ ಮಾಡಿಕೊಂಡಿರೋ ಜಮೀನಿನಲ್ಲಿದ್ದ ಎರಡು ಮತ್ತಿ ಮರಗಳನ್ನ ಅನಾಮತ್ತಾಗಿ ಕಡಿದು ಹಾಕಿದ್ದರು ಅಂತಾ ಒಂದು ಕೇಸು ದಾಖಲಾಗಿತ್ತು, ಆ ನಂತರದಲ್ಲಿ ಈಗ್ಗೆ ಎರಡು ತಿಂಗಳ ಹಿಂದಷ್ಟೇ ಇವರ ಮನೆಯಲ್ಲಿ ಒಂದೂವರೇ ಮೀಟರ್ ಸಾಗವಾನಿ ಮರದ ತುಂಡುಗಳು ಜಪ್ತಿ ಮಾಡಿಕೊಳ್ಳಲಾಗಿತ್ತಂತೆ. ಆ ಬಗ್ಗೆಯೂ ಕೇಸು ದಾಖಲಾಗಿದೆ. ಆದ್ರೆ, ಶಾಶ್ವತ ಕ್ರಮಗಳೇನು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಅದೇನೇ ಇರಲಿ, ಇವತ್ತಿನ ದಾಳಿಯಲ್ಲಿ ಎಸಿಎಫ್ ವಾಲಿ ಸಾಹೇಬ್ರ ಮಾರ್ಗದರ್ಶನದಲ್ಲಿ RFO ಕುಳ್ಳೊಳ್ಳಿ ಯವರ ನೇತೃತ್ವದಲ್ಲಿ, ಮೈನಳ್ಳಿ ಭಾಗದ ಖಡಕ್ ಅಧಿಕಾರಿ ಸಂತೋಷ ಕುರುಬರ್, ಶ್ರೀಶೈಲ್ ಐನಾಪುರ್ ಜೊತೆಗೆ ಬಸವರಾಜ್ ನಾಯ್ಕ್, ನಿಸಾರ್, ಮಂಜು ಪೂಜಾರ್, ನಾರಾಯಣ್ ಸಿಂಗ್, ಅಶೋಕ್ ಮೇಲಿನಮನಿ, ನಾಸಿರ್, ಅಬ್ದುಲ್, ಮುಸ್ತಾಕ್, ಗಣಪತಿ, ಶಕೀಲ್ ಮತ್ತು ನಾಗರಾಜು ಫಿಲ್ಡಿನಲ್ಲಿದ್ದರು.